ಬರ್ಕನ್‍ಹೆಡ್ -
	ಇಂಗ್ಲೆಂಡಿನ ವಿರಲ್ ಪರ್ಯಾಯ ದ್ವೀಪದ ಮರ್ಸಿಸೈಡ್ ಕೌಂಟಿ ಆಡಳಿತ ವಿಭಾಗಕ್ಕೆ ಸೇರಿದ ಒಂದು ಬಂದರು ನಗರ. 1974ರ ವರೆಗೆ ಚೆಷೈರ್ ಜಿಲ್ಲೆಗೆ ಸೇರಿತ್ತು. ಬೀಚ್ ಮರಗಳು ದಟ್ಟವಾಗಿರುವ ಭೂಶಿರದಲ್ಲಿರುವುದರಿಂದ ಈ ಸ್ಥಳಕ್ಕೆ ಬಿರ್ಚನ್‍ಹೆಡ್ ಅಥವಾ ಬರ್ಕನ್‍ಹೆಡ್ ಎಂಬ ಹೆಸರು ಬಂದಿದೆ. ನಗರ ಲಿವರ್‍ಪೂಲ್ ನಗರಕ್ಕೆ ಎದುರಾಗಿ ಮರ್ಸಿ ನದಿಯ ಎಡದಂಡೆಯ ಮೇಲಿದೆ. 1810ರಲ್ಲಿ ಬರ್ಕನ್‍ಹೆಡ್ 100 ಮಂದಿಯ ಕಿರುಗ್ರಾಮವಾಗಿದ್ದು, 1824ರಲ್ಲಿ ಹಡಗು ತಯಾರಿಕೆಯ ಕಾರ್ಖಾನೆ ಸ್ಥಾಪಿತವಾದ ಮೇಲೆ ನಗರವಾಗಿ ಬೆಳೆಯಿತು. ಜನಸಂಖ್ಯೆ 1,37,738 (1971).

	ಬರ್ಕನ್ ಹೆಡ್ ಬಳಿ ಹರಿವ ಮರ್ಸಿ ನದಿಗೆ ಬೀಳುವ ವೊಲ್‍ಸೀ ಪೂಲ್ ಎಂಬ ತೊರೆಯನ್ನು ಹಡಗುಗಳು ನಿಲ್ಲಲು ಅನುಕೂಲವಾಗುವಂತೆ 16 ಕಿಮೀ ಉದ್ದದ ಹಡಗು ಕಟ್ಟೆಯನ್ನು ನಿರ್ಮಿಸಿ 1847ರಲ್ಲಿ ಪ್ರಾರಂಭಿಸಲಾಯಿತು. 1857ರಲ್ಲಿ ಈ ಹಡಗುಕಟ್ಟೆ ಬರ್ಕನ್‍ಹೆಡ್ ನಗರ ರೇವುಮಂಡಲಿಯ ನಿಯಂತ್ರಣಕ್ಕೊಳಾಗಾಯಿತು. ಇಂದು ಭಾರಿ ಹಡಗುಗಳ ನಿರ್ಮಾಣ ಸ್ಥಳವಾಗಿದೆ. ಇಂಗ್ಲೆಂಡಿನ ಮಧ್ಯಭಾಗದಲ್ಲಿ ತಯಾರಾಗುವ ಸರಕುಗಳು ಇಲ್ಲಿಂದ ಹೊರದೇಶಗಳಿಗೆ ರಫ್ತಾಗುತ್ತವೆ. ಯೂರೊಪ್ ನಗರಗಳಲ್ಲೆ ಪ್ರಥಮವಾಗಿ ಟ್ರಾಮ್‍ಕಾರುಗಳನ್ನು ಈ ನಗರದಲ್ಲಿ ಹಾಕಲಾಯಿತು. ಹಿಟ್ಟಿನ ಗಿರಣಿಗಳು, ಹಡಗು ನಿರ್ಮಾಣ ಮತ್ತು ರಿಪೇರಿ, ಜಾನುವಾರುಗಳ ಮಾರಾಟ, ಮಾಂಸದ ರಫ್ತು, ಆಹಾರ ಧಾನ್ಯಗಳ ಪರಿಷ್ಕರಣ, ಬಟ್ಟೆ ತಯಾರಿಕೆ-ಇವು ಇಲ್ಲಿಯ ಕೆಲವು ಮುಖ್ಯ ಉದ್ಯಮ ಹಾಗೂ ಕೈಗಾರಿಕೆಗಳು.

	ಮರ್ಸಿ ನದಿಯ ಮೇಲೆ 1330ರಿಂದಲೇ ಲಿವರ್‍ಪೂಲ್ ನಗರಕ್ಕೆ ಹಡಗು ಸಂಚಾರದ ಸೌಲಭ್ಯವಿದೆ. ಬರ್ಕನ್‍ಹೆಡ್ ಮತ್ತು ಲಿವರ್‍ಪೂಲ್ ನಗರಕ್ಕೆ ಸಂಪರ್ಕ ಕಲ್ಪಿಸುವ ಮರ್ಸಿ ನದಿಯ ಕೆಳಗಡೆಯಲ್ಲಿ ನಿರ್ಮಿಸಿರುವ 3ಕಿಮೀಗಳಿಗಿಂತ ಹೆಚ್ಚಾದ ರೈಲು ಸುರಂಗ ಮಾರ್ಗವನ್ನು 1886ರಲ್ಲೇ ನಿರ್ಮಿಸಿದ್ದಾರೆ. ವಾಹನ ಸಂಚಾರಕ್ಕೆ ನದಿಯ ತಳಗಿನ ಸುರಂಗ ಮಾರ್ಗವನ್ನು 1934ರಲ್ಲಿ ತೆರೆಯಲಾಯಿತು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ